ಮಹಾಯಾನ
ಮಹಾಯಾನ ಎಂದರೆ ದೊಡ್ಡ ದೋಣಿ ಎಂದು ಅರ್ಥ, ಪ್ರಪಂಚದಲ್ಲಿ ತೊಳಲಾಡುವ ಜೀವಿಗಳನ್ನು ಸಂಸಾರ ಎಂಬ ಸಮುದ್ರದಿಂದ ದಾಟಿಸಿ ನಿರ್ವಾಣದ ದಡಮುಟ್ಟಿಸಲು ಬುದ್ಧ ಮಾಡಿದ ಎರಡು ದೋಣಿಗಳಲ್ಲಿ ಇದು ದೊಡ್ಡದು; ಚಿಕ್ಕದು ಹೀನಯಾನ ಎನಿಸಿಕೊಳ್ಳುತ್ತದೆ.						(ನೋಡಿ- ಹೀನಯಾನ)

ಪ್ರಪಂಚದ ಬೌದ್ಧಪಂಥಗಳಲ್ಲಿ ಇವೆರಡೂ ಪ್ರಮುಖವಾದವು. ನೇಪಾಳ. ಟಿಬೆಟ್. ಚೀನ. ಮಂಗೋಲಿಯ. ಕೊರಿಯ, ಜಪಾನ್ ಈ ದೇಶಗಳಲ್ಲಿ ಮಹಾಯಾನ ಬೌದ್ಧಪಂಥ ಪ್ರಚಲಿತವಾಗಿದೆ. ಒಂದೊಂದು ದೇಶದಲ್ಲೂ ಇದು ಶಾಖೋಪಶಾಖೆಗಳಾಗಿ ಕವಲೊಡೆದು ಬೇರೂರಿದೆ.

	ಮಹಾಯಾನ ಎಂಬ ಹೆಸರು ಹೇಗೆ ಬಂದಿತು ಎಂದು ಹೇಳುವುದು ಕಷ್ಟ. ಪ್ರಾಚೀನ ಎನಿಸುವ ಬೌದ್ಧಗ್ರಂಥಗಳಲ್ಲಿ ತ್ರಿಪಿಟಕ ಅಥವಾ ತ್ರಿಪಿಟಕೇತರ ಪಾಳೀ ವಾಙ್ಮಯದಲ್ಲಿ ಮಹಾಯಾನದ ಪ್ರಸ್ತಾಪವಿಲ್ಲ. ಮಹಾಯಾನ ಹೊಸಪಂಥ ಎಂಬುದು ನಿರ್ವಿವಾದ. ಬುದ್ಧವಚನದಲ್ಲಿ ಅಡಗಿರುವ ಇಂಗಿತವನ್ನು ಮುಂದೆ ಬಂದ ಬೋಧಿಸತ್ತ್ವರೂ ಸಂತರೂ ವಿವರಿಸಿದರೆಂದೂ ಮಹಾಯಾನದವರ ನಿಲವು. ಸದ್ಧರ್ಮ ಪುಂಡರೀಕದಲ್ಲಿ ಬುದ್ಧಕಾಯವನ್ನು ವಿವರಿಸುತ್ತ ಹೀನರಿಗೂ ಶ್ರೇಷ್ಠ ಮತಿಗಳಿಗೂ ನಾನು ಧರ್ಮವನ್ನು ಹೇಳುತ್ತೇನೆ. ಅಲಸಿಕೆಯಿಲ್ಲದೆ ಧರ್ಮ ವರ್ಷವನ್ನು ಕರೆಯುತ್ತಿದ್ದೇನೆ ಎಂದು ಬುದ್ಧನೇ ಹೇಳಿದಂತೆ ಮಾತಿದೆ, ಇಲ್ಲಿ ಹೀನರೆಂದರೆ ಮಹಾಯಾನದಲ್ಲಿ ಒಲವಿಲ್ಲದವರು ಎಂದು ಗಮನಿಸಬೇಕು. ಮಹಾಯಾನದವರ ತ್ರಿಪಿಟಕಗಳಲ್ಲಿ ಬುದ್ಧನೇ ಮುಖ್ಯ ಪ್ರಮೇಯಗಳನ್ನು ನಿರೂಪಿಸಿದ ಎಂಬ ಉಲ್ಲೇಖವಿದೆ. ಆದರೆ ಇಂಥ ಪಂಥದ ಹೆಗ್ಗಳಿಕೆ ಹೇಳಲು ಸೂಚಿಸಿದ ಸಂದರ್ಭ ಎಂದು ಒಪ್ಪಬೇಕು. 

	ಮಹಾಯಾನ ಯಾವ ಕಾಲದಲ್ಲಿ ಸ್ಪಷ್ಟವಾಗಿ ಕವಲೊಡೆಯಿತು ಎಂದು ನಿರ್ಧರಿಸುವುದು ಕಷ್ಟ, ಅತಿಪ್ರಾಚೀನ ಎನಿಸುವ ಲಲಿತವಿಸ್ತರ. ಸದ್ಧರ್ಮಪುಂಡರೀಕ, ಮಹಾಪ್ರಜಾಪಾರಮಿತಾ. ಲಂಕಾವತಾರಸೂತ್ರ ಮುಂತಾದವೆಲ್ಲ ಕ್ರಿಸ್ತಾಬ್ದ ಮೊದಲನೆಯ ಶತಮಾನದ ಅನಂತರ ರಚಿತವಾದವು. ಕನಿಷ್ಕನ ಕಾಲದಲ್ಲಿ, ಎಂದರೆ ಕಿ.ಪೂ.128-129ರಲ್ಲಿ ನಡೆದ ನಾಲ್ಕನೆಯ ಬೌದ್ಧ ಸಂಗೀತಿ ಮಹಾಯಾನದ ಉಗಮ ಕಂಡಿತು ಎಂಬ ನಂಬಿಕೆಯಿದೆ. ಮಹಾಯಾನದ ಪೂರ್ವರಂಗ ಮಹಾಸಾಂಘಿಕಪಂಥ. ಇವರಿಗೂ ಸ್ಥವಿರವಾದಿಗಳಿಗೂ ವೈಶಾಲಿಯಲ್ಲಿ ನಡೆದ ಮೂರನೆಯ ಸಂಗೀತಿಯಲ್ಲೇ ವಿವಾದವೆದ್ದಿತು, ಕನಿಷ್ಕನ ಗುರುವಾದ ಅಶ್ವಘೋಷನ ಮಹಾಯಾನ ಶ್ರದ್ಧೋತ್ಪಾದಶಾಸ್ತ್ರಗ್ರಂಥ ಈ ಪಂಥದ ಬುನಾದಿಯಾಯಿತೆಂದು ಹೇಳುತ್ತಾರೆ. ಆದರೆ ಮಹಾಯಾನದ ಕೆಲವು ಪ್ರಾಚೀನ ಆಚಾರ್ಯರು ಗ್ರಂಥಗಳು ಹೀನಯಾನದ ಸರ್ವಸ್ತಿವಾದಪಂಥಕ್ಕೆ ಸೇರಿದ್ದರು ಎಂಬುದು ಸ್ವಾರಸ್ಯವಾದ ವಿವರ. ಕ್ರಿ.ಶ. 200ರ ಸುಮಾರಿಗೆ ಹರಿವರ್ಮ ಎಂಬಾತ ಬರೆದ ಸತ್ಯಸಿದ್ಧಿಶಾಸ್ತ್ರ ಮಹಾಯಾನ ಪಕ್ಷಪಾತಿಯಾದ ಗ್ರಂಥ ಎನ್ನಬಹುದು. ಆದರೆ ಅದರಲ್ಲಿ ಹಲವು ವಿವರಗಳು ಸರ್ವಾಸ್ತಿವಾದದ ವಿವರಗಳೇ; ಅವನ ಗುರುವಾದ ಕುಮಾರಲಬ್ಧನೂ ಸರ್ವಾಸ್ತಿವಾದಿಯೇ. ಈತ ಮಾಡಿದ ಸಂವೃತಿಕ ಪಾರಮಾರ್ಥಿಕ ನೆಲೆಗಳ ವಿಭಾಗವೇ ನಾಗಾರ್ಜುನನ ಮಾಧ್ಯಮಿಕ ಪಂಥದಲ್ಲೂ ಇದೆ. ಸಂವೃತಿಕನೆಲೆಯಲ್ಲಿ ಪುದ್ಗುಲವನ್ನು ಈತ ಒಪ್ಪಿ ಅನಾತ್ಮವಾದವನ್ನು ಅಲ್ಲಗಳೆದಿದ್ದಾನೆ. 

	ತಾತ್ತ್ವಿಕ ದೃಷ್ಟಿಯಿಂದ ಹೀನಯಾನ ಮಹಾಯಾನದವರಿಗೆ ಅಷ್ಟಾಗಿ ಭೇದವಿರಲಿಲ್ಲ. ಮಹಾಯಾನದವರೂ ಹೀನಯಾನದವರಂತೆ ಪುನರ್ಜನ್ಮ ಮತ್ತು ಕರ್ಮಫಲಗಳನ್ನು ಒಪ್ಪುತ್ತಾರೆ. ವ್ಯಕ್ತಿ ತನ್ನ ಪ್ರಯತ್ನದಿಂದ ನಿರ್ವಾಣ ಪಡೆಯುವುದು ಸಾಧ್ಯ ಎಂದೂ ಕೂಡ ಒಪ್ಪುತ್ತಾರೆ. ನಾಲ್ಕು ಸತ್ಯಗಳು ಸ್ಕಂಧ ಆಯತನ, ಪ್ರತೀತ್ಯ ಸಮುತ್ಪಾದ ಎಲ್ಲವನ್ನು ಒಪ್ಪುತ್ತಾರೆ. ಆದರೆ ಮನೋಧರ್ಮದಲ್ಲಿ ದೊಡ್ಡ ಭೇದವಿದೆ. ಮಹಾಯಾನದವರ ಪ್ರಕಾರ ಪ್ರತೀತ್ಯಸಮುತ್ಪಾದ ಅನಾತ್ಮವನ್ನು ಸೂಚಿಸುವುದಿಲ್ಲ. ಶೂನ್ಯತೆಯನ್ನು ಸೂಚಿಸುತ್ತದೆ. ಶೂನ್ಯತೆ ಎಂದರೆ ಮಾಧ್ಯಮಿಕರು ಶೂನ್ಯತೆ ಎಂದರೆ ವಿಜ್ಞಾನವಾದಿಗಳು ಆಲಯವಿಜ್ಞಾನ ಎನ್ನುತ್ತಾರೆ, ಅದ್ವೈತವೇದಾಂತದ ಬ್ರಹ್ಮನಿದ್ದಂತೆ ಇದು. ಇದೇ ಬುದ್ದನ ನೈಜ ಸ್ವರೂಪ. ಆದರೆ ಸಂವೃತ್ತಿಯ ಸಂಸಾರದಲ್ಲಿರುವ ಪ್ರಾಣಿಗಳ ಮೇಲೆ ಕರುಣೆತೋರಿ ಅವರನ್ನು ಉದ್ದರಿಸಲು ಮಾನುಷೀ ರೂಪದಲ್ಲಿ ಅವತರಿಸುತ್ತಾನೆ. ಐತಿಹಾಸಿಕ ವ್ಯಕ್ತಿಯಾದ ಶಾಕ್ಯಮುನಿ ಬುದ್ದ ಲೋಕಸಂಗ್ರಹಾರ್ಥವಾಗಿ ಅವತರಿಸಿದ ಪರಮಾರ್ಥತತ್ವ್ತವೇ ಇದು. ಹೀನಯಾನದವರು ಬುದ್ದನನ್ನು ಮನುಷ್ಯನೆಂದೇ ಪರಿಗಣಿಸಿದ್ದರು. ಎಲ್ಲರಂತೆ ಈತನು ಹುಟ್ಟಿ, ಬೆಳೆದು ತೀರಿಕೊಂಡ ಗುರುವೆಂದು ಅವರ ದೃಷ್ಟಿ. ಶೂನ್ಯತೆಯನ್ನು (ಅಥವಾ ವಿಜ್ಞಾನವನ್ನು ಅಥವಾ ತಥತವನ್ನು) ಧರ್ಮಕಾಯವೆಂದೂ ಐತಿಹಾಸಿಕ ವ್ಯಕ್ತಿಯಾದ ಶಾಕ್ಯಮುನಿಯನ್ನು ನಿರ್ಮಾಣಕಾಯವೆಂದೂ ಮೇಲಿನ ಲೋಕಗಳಲ್ಲೂ ಬೋಧಿಸತ್ತ್ವರಿಗೂ ವ್ಯಕ್ತವಾಗುವ ಬುದ್ಧತತ್ತ್ವವನ್ನು ಸಂಭೋಗಕಾಯವೆಂದೂ ಮಹಾಯಾನದವರು ವಿವರಿಸಿದರು. ಸಂಭೋಗಕಾಯದಿಂದ ಹೊರಹೊರಟಿದ್ದು ನಿರ್ಮಾಣಕಾಯ: ಎಂದರೆ ಅವತಾರ. ಬುದ್ಧರು ಸಂಬೋಧಿಯನ್ನು ಮುಟ್ಟಿದರೂ ಮತ್ತೆ ಮತ್ತೆ ನಿರ್ಮಾಣಕಾಯವನ್ನು ಧರಿಸಿ ಬರುವುದು ಧರ್ಮಕಾಯದಲ್ಲಿಯ ಒತ್ತಡದಿಂದ.

	ಮಹಾಯಾನದವರಿಗೆ ಬುದ್ಧನಿಗಿಂತ ಬೋಧಿಸತ್ತ್ವರಲ್ಲಿ ವಿಶ್ವಾಸ ಹೆಚ್ಚು., ಹೀನಯಾನದವರಲ್ಲೂ ಬೋಧಿಸತ್ತ್ವರ ಕಲ್ಪನೆಯುಂಟು. ಬೋಧಯೇ ಸತ್ತ್ವವಾಗಿ ಉಳ್ಳ ಅಥವಾ ಮುಂದೆ ಬೋಧಿಯನ್ನು ಪಡೆಯುವ ಎಂಬ ಅರ್ಥದಲ್ಲಿ ಶಾಕ್ಯಮುನಿ ಪಡೆದು ಬುದ್ದನಾಗುವ ತನಕವೂ ಅವನನ್ನು ಬೋಧಿಸತ್ತ್ವನೆಂದು ಅವರು ವ್ಯವಹರಿಸುತ್ತಾರೆ. ಆದರೆ ಮಹಾಯಾನರಲ್ಲಿ ಬೋಧಿಸತ್ತ್ವ ಎಂದರೆ ಎಲ್ಲ ಪಾರಮಿಕೆಗಳನ್ನೂ ಪೂರೈಸಿ ಬೋಧಿಜ್ಞಾನದಿಂದ ಸಂಪನ್ನನಾಗಿದ್ದು ನಿರ್ವಾಣಪ್ರಾಪ್ತಿಗೆ ಪಾತ್ರನಾಗಿದ್ದರೂ ಪುನರ್ಜನ್ಮವಿಲ್ಲದ ನಿರ್ಮಾಣವನ್ನು ಸೇರದೆ ಮತ್ತೆ ಮತ್ತೆ ದೇಹಧಾರಣೆಮಾಡಿ ಬರುವವೆಂದರ್ಥ. ನಿರ್ಮಾಣವನ್ನು ಮುಂದೂಡುವುದು ಜೀವಿಗಳ ಮೇಲಿನ ಅನುಕಂಪದಿಂದ. ಕರುಣೆಯಿಂದ, ಯಾವೊಂದು ಸಣ್ಣಪ್ರಾಣಿ ಬೋಧಿಯಿಲ್ಲದೆ ಸಂವೃತ್ತಿಯಲ್ಲಿ ತೊಳಲಾಡುವುದೋ ಅಲ್ಲಿಯತನಕವೂ ತನಗೆ ನಿರ್ವಾಣ ಬೇಡ ಎಂಬ ಮಹಾಸಂಕಲ್ಪ (ಪ್ರಾಣಿಧಾನ) ಬೋಧಿಸತ್ತ್ವನದು, ತನ್ನ ಪಾರಮಿಕೆಗಳಿಂದ ಉಂಟಾದ ಪುಣ್ಯವನ್ನೆಲ್ಲ ಜಗತ್ತಿನ ಹಿತಕ್ಕೆ ಧಾರೆಯೆರೆದು ನಿಲ್ಲುವ ಮನೋವೃತ್ತಿ ಬೋಧಿಸತ್ತ್ವನದು, ಬುದ್ದನಿಗೆ ಪ್ರಜ್ಞೆ ಮುಖ್ಯರಸವಾದರೆ ಯೋಗಾವಚಾರನೂ ಕೇವಲ ತನ್ನ ಮುಕ್ತಿ ಸಾಧಿಸಿಕೊಳ್ಳಲೆಂದೇ ಧ್ಯಾನಸಮಾಧಿಗಳನ್ನು ಮಾಡಿ ಅರ್ಹತನಾಗುತ್ತಾನೆ. ಈ ಮಾರ್ಗದಲ್ಲಿ ಒಬ್ಬೊಬ್ಬನಿಗೆ ಮಾತ್ರ ಎಡೆಯಿರುವುದರಿಂದ ಇದನ್ನು ಹೀನಯಾನ ಎಂದು ಮಹಾಯಾನದವರು ಕರೆದರು. ಬೊಧಿಸತ್ತ್ವ ತನ್ನ ಕರುಣೆಯಿಂದ, ಪುಣ್ಯ ಪರಾವರ್ತದಿಂದ ಇಡೀ ಲೋಕವನ್ನು ಮುಕ್ತಿಗೆ ಒಯ್ಯಲು ಎಣಿಸುವುದರಿಂದ ಈ ಮಾರ್ಗದಲ್ಲಿ ಎಲ್ಲರಿಗೂ ಸ್ಥಳವುಂಟು; ಹೀಗಾಗಿ ಇದು ಮಹಾಯಾನ ಎನಿಸಿಕೊಳ್ಳುತ್ತದೆ.

	ಮಹಾಯಾನದ ಪ್ರಕಾರ ಬುದ್ಧರು ಬೋಧಿಸತ್ತ್ವರೂ ಅಸಂಖ್ಯಾತರಾಗಿದ್ದಾರೆ. ಹೀನಯಾನದಲ್ಲಿ ಇವರ ಅಗತ್ಯವಿರಲಿಲ್ಲ. ಪ್ರಖರವಾದ ಧ್ಯಾನದಿಂದಲೇ ಬೋಧೀ ಒದಗುವುದರಿಂದ ವ್ಯಕ್ತಿಗತವಾದ ಬಲಗಳು ಮುಖ್ಯ ವಿಚಾರವಾಗಿದ್ದಿತು. ಆದರೆ ಈಗ ಈ ಬಲವಿಲ್ಲದ ಸಾಮಾನ್ಯ ಜನರಿಗೂ ನಿರ್ವಾಣ ಸಾಧ್ಯವಾಗಲು ಬುದ್ಧ ಬೋಧಿಸತ್ತ್ವರಲ್ಲಿ ಭಕ್ತಿಯನ್ನು ಮಾಡಬೇಕೆಂಬ ಕಲ್ಪನೆ ಬಂದಿತು. ಇಲ್ಲಿ ಧ್ಯಾನಕ್ಕೆ ಅಷ್ಟಾಗಿ ಪ್ರಾಧಾನ್ಯವಿಲ್ಲ. ಬುದ್ಧಶಕ್ತಿಯೇ ಮಹಾಯಾನ ಗ್ರಂಥಗಳ ಪ್ರಮುಖ ವಿಚಾರ. ಧ್ಯಾನಮಾಡಬೇಕಾದ ಅಗತ್ಯವಿಲ್ಲ. ಪ್ರಣಿಧಿಗಳನ್ನು ಪೂರೈಸಬೇಕಾದುದಿಲ್ಲ. ಬುದ್ಧನಲ್ಲಿಯೂ ಬೋಧಿಸತ್ತ್ವರಲ್ಲಿಯೂ ಭಕ್ತಿ ಇಟ್ಟು ಅವರ ನಾಮ ಸ್ಮರಣೆಮಾಡುವುದರಿಂದಲೇ, ಜಪಿಸುವುದರಿಂದಲೇ ಶುಭವಾಗುತ್ತದೆ. ಅಮಿತಾಯುರ್ಧಾನಸೂತ್ರ, ಸದ್ಧರ್ಮಪುಂಡರಿಕೆ ಮುಂತಾದ ಮಹಾಯಾನ ಗ್ರಂಥಗಳಲ್ಲಿ ಇದೇ ಭಾವವಿದೆ. ಈ ಗ್ರಂಥಗಳನ್ನು ಓದಿದರೇ ಸಾಕು ಪುಣ್ಯ ಒದಗುವುದೆಂಬ ಕಲ್ಪನೆಯೂ ಇದೆ. ಹೀಗಾಗಿ ಮಹಾತ್ಮಗಳು ಸ್ತೋತ್ರಗಳು ಧಾರಣೆಗಳೂ ತಂತ್ರಗಳು ಮಹಾಯಾನದಲ್ಲಿ ವಿಪುಲವಾಗಿ ಬಂದವು. ಹರ್ಷನ ಕಾಲದಲ್ಲೇ (ಕ್ರಿ.ಶ. 600ರ ಸುಮಾರಿಗೆ) ಎಂದರೆ ಮಹಾಯಾನ ಪಂಥದ ಆರಂಭಕಾಲದಲ್ಲೆ. ಅವನು ಸುಪ್ರಭಾತಸ್ತೋತ್ರ ಮತ್ತು ಅಷ್ಟಮಹಾ ಶ್ರೀಚೈತ್ರಸ್ತೋತ್ರ ರಚಿಸಿದ. ಒಂಬತ್ತನೆಯ ಶತಮಾನದಲ್ಲಿ ವಜ್ರದತ್ತನೆಂಬ ಕವಿ ಲೋಕೇಶ್ವರ ಶತಕ ಬರೆದು ಪೂರೈಸಿದೊಡನೆ ಅವಲೋಕಿತೇಶ್ವರ ಬೋಧಿಸತ್ತ್ವ ಪ್ರತ್ಯಕ್ಷನಾದನಂತೆ. ಈ ದೃಷ್ಟಿಯಿಂದ ನೂರಾರು ಸಾವಿರಾರು ದೇವದೇವತೆಯರು ಬೊಧಿಸತ್ತ್ವರು ರೂಪಗೊಂಡರು. ಇವರಲ್ಲಿ ತಾರಾಭಗವತ, ಅವಲೋಕಿತೇಶ್ವರ, ಅಮಿತಾಬ, ಸಮಂತಬದ್ರ. ಮೈತ್ರೇಯಬುದ್ಧ, ವೈರೋಚನ, ಮಂಜುಶ್ರೀ, ಕ್ಷಿತಗರ್ಭ, ಅಚಲ, ಅಕ್ಷೊಭ್ಯ ಇವರು ಪ್ರಸಿದ್ಧರಾಗಿದ್ದಾರೆ. ಈ ದೇವದೇವತೆಗಳ ಪ್ರೀತ್ಯರ್ಥವಾಗಿ ಬೀಜಾಕ್ಷರಗಳನ್ನೊಳಗೊಂಡ ಮಂತ್ರಗಳೂ ಸಿದ್ಧವಾದುವು. ಓಂ ಅಕ್ಷೋಭ್ಯ ಹುಂ. ಅಮರುಕುಂಖಂ. ಓಂ ಮಣಿಪದ್ಮೇ ಹುಂ. ಇತ್ಯಾದಿ. ಈ ಧಾರಿಣಿಗಳಿಗೆ ಅನುರೂಪವಾದ ಮುದ್ರೆಗಳು ರೂಪುಗೊಂಡವು. ಆರಾಧ್ಯಮೂರ್ತಿಗಳು ಮಂದಿರಗಳೂ ಕಾಣಿಸಿಕೊಂಡವು, 

	ಹೀಗಾಗಿ ಕಾಲಕ್ರಮದಲ್ಲಿ ಮಹಾಯಾನದ ಅಂತರಾಳದಿಂದ ಮಂತ್ರಯಾನ. ತಂತ್ರಯಾನ, ವಜ್ರಯಾನಗಳು ತಲೆಯೆತ್ತಿಕೊಂಡುವು. ಈ ಯಾನಗಳ ಪ್ರಕ್ರಿಯೆಗಳನ್ನು ವಿವರಿಸಲು ಹೊಸದೊಂದು ಪರಿಭಾಷೆಯೇ ಸೃಷ್ಟಿಯಾಯಿತು. ಸಂಸಾರ ತಾರಕವಾದ ಪ್ರಜ್ಞೆ ಸ್ತ್ರೀಯೆಂದು ಉಪಾಯ ಪುರಷನೆಂದೂ ಎರಡರ ಸಂಯೋಗದಿಂದ ನಿರ್ವಾಣಾಂಕುರವಾಗುವುದೆಂದೂ ತಂತ್ರಯಾನದ ಶ್ರದ್ಧೆ ಸ್ವಯಂಭುವಾದ. ಶೂನ್ಯತೆಯ ಪ್ರಸಾರವಾದ, ಆದ್ಯಂತರಹಿತವಾದ ಆದಿಬುದ್ಧ ಅವನಿಂದ ಅವತರಿಸಿದ ಧ್ಯಾನಿಬುದ್ಧರು, ಅನಂತರ ರೂಪತಳೆಯುವ ಭೋಧಿಸತ್ತ್ವರು ಇವರೆಲ್ಲರನ್ನೂ ಒಳಗೊಂಡ ಮಹಾಯಾನ ದೊಡ್ಡದೋಣಿಯೇ. ಇದರಲ್ಲಿ ಮಾಧ್ಯಮಿಕ ಯೋಗಾಚಾರ_ವಿಜ್ಞಾನವಾದಗಳಂಥ ಬೌದ್ಧಿಕ, ಯೌಗಿಕ ಹಿನ್ನಲೆಯಲ್ಲಿ ತಂತ್ರಯಾನ, ವಜ್ರಯಾನಗಳಂಥ ಆಚಾರಪ್ರಧಾನವಾದ ಅಂಗಗಳು ಒದಗಿಬಂದಿರುವುದು ಸ್ಪಷ್ಟವಾಗಿದೆ. ಹೀನಯಾನ ಆ ಕಾಲದ ವಿಚಾರಧಾರೆಗೆ ಅಳವಡಿಸಿಕೊಳ್ಳಲಾರದೆ ಹಿಂದುಳಿದಾಗ ಮಹಾಯಾನ ಪ್ರಚಲಿತವಾದ ನವ್ಯವಿಚಾರಗಳನ್ನೆಲ್ಲ ಗ್ರಹಿಸಿ ಜೀರ್ಣಿಸಿ ಕೊಂಡು ಬಹುಶಾಖೆಗಳಲ್ಲಿ ಹರಡಿತು, ಭಾಗವತ ಪಂಥದಲ್ಲಿ ಪ್ರಮುಖವಾದ ಕೃಷ್ಣ ಭಕ್ತಿಯೇ ಬುದ್ಧಭಕ್ತಿಗೆ ಸ್ಪೂರ್ತಿಯಿತ್ತೆಂದು ಹೇಳುತ್ತಾರೆ. ಮಾಧ್ಯಮಿಕರ ಶೂನ್ಯತೆಯ ವಾದ ಆಗ ಮೂಡಿಬರುತ್ತಿದ್ದ ಶಬ್ದಾದ್ವೈತವಾದದ ಪ್ರತಿಧ್ವನಿ ಎನ್ನಬಹುದು. ಮುಂದೆ ಒದಗಿದ ಮಹಾಯಾನ ಹೊರದೇಶಗಳಲ್ಲಿ ಹರಡಿದಾಗ ಆಯಾದೇಶಗಳಲ್ಲಿ ಪ್ರಾಚೀನಕಾಲದಿಂದ ಪ್ರಚಲಿತವಾಗಿದ್ದ ಕಲ್ಪನೆಗಳನ್ನು ಅಡಗಿಸಿಕೊಂಡು ನಿಂತಿತು. ಟಿಬೆಟ್, ಚೀನ. ಜಪಾನ್ ದೇಶಗಳಲ್ಲಿ ಈ ಪ್ರವೃತ್ತಿ ಸ್ಪಷ್ಟವಾಗಿದೆ.

	ಮಹಾಯಾನವನ್ನು ಕೆಲವೊಮ್ಮೆ ಬೋಧಿಸತ್ತ್ವಯಾನ ಎನ್ನುತ್ತಾರೆ. ಈಚೆಗೆ ಔತ್ತರೇಯ ಬೌದ್ಧಪಂಥವೆಂದೂ ಹೆಸರು ಬಂದಿದೆ. ಭಾರತದೇಶದಿಂದ ಉತ್ತರಕ್ಕಿರುವ ದೇಶಗಳಲ್ಲಿ ಇದು ಹರಡಿರುವುದು ಈ ಹೆಸರಿಗೆ ಕಾರಣ. ಈ ಪಂಥದ ಪ್ರಮೇಯ ಗ್ರಂಥಗಳೆಲ್ಲ ಸಂಸೃತದಲ್ಲೇ ಇರುವುದರಿಂದ ಇದನ್ನು ಸಂಸೃತ ಬೌದ್ಧಧರ್ಮವೆಂದೂ ಕರೆಯುತ್ತಾರೆ (ಹೀನಯಾನದ ಗ್ರಂಥಗಳು ಪಾಳಿ ಭಾಷೆಯಲ್ಲಿರುವುದರಿಂದ ಇದು ಪಾಳಿಬೌದ್ಧಧರ್ಮವೆನಿಸಿಕೊಳ್ಳುತ್ತದೆ). ಮಹಾಯಾನವೆಲ್ಲವೂ ಒಂದೇ ಮತವೆಂದು ಗ್ರಹಿಸುವುದು ತಪ್ಪಾಗುತ್ತದೆ. ಕ್ರಿ.ಶ. 557ರ ಸುಮಾರಿಗೆ ಚೀನಾದಲ್ಲಿ ಪ್ರಸಿದ್ಧವಾದ ಮಹಾಯಾನ ಅವತಂಸಕಮತದ. ಪ್ರವರ್ತಕನಾದ ಫಾ-ತ್ಸಾನ್ ಎಂಬಾತ ಬೌದ್ಧಧರ್ಮವನ್ನು ಹೀನಯಾನ, ಪ್ರಾಚೀನ ಮಹಾಯಾನ ಅರ್ವಾಚೀನ ಮಹಾಯಾನ, ಧ್ಯಾನಪಂಥ, ಪ್ರೌಢಮಹಾಯಾನ (ಎಂದರೆ ಅವತಂಸಕಮತ)-ಹೀಗೆ ಉತ್ತರೋತ್ತರ ಪ್ರಗಲ್ಭವೆಂದು ಐದು ಬಗೆಗಳಾಗಿ ನಿರೂಪಿಸಿದ್ದಾರೆ. ಈ ತಾರತಮ್ಯದೃಷ್ಟಿ ಮಹಾಯಾನ ಪಂಥದ ಎಲ್ಲ ಶಾಖೆಗಳಲ್ಲೂ ಕಾಣಬರುತ್ತದೆ. 
(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ